ಎದೆಯೊಳಿರುವ ಕಹಿಯನಳಿಸಿ
ಹಬ್ಬಕೆಂದು ಸಿಹಿಯನುಳಿಸಿ
ಒಲವರಾಗ ಹಾಡ ಬಯಸಿ
ಬಂದಿತೀ ಯುಗಾದಿ ಚೆಲುವ
ತಂದಿತೇ ಯುಗಾದಿ
ಶತಮುಕ್ತಕ ಗಾನವಾಗಿ
ಕೋಗಿಲೆ ಕೂಜನವದಾಗಿ
ಕೋಟಿಕಂಠ ಮೊಳಗುವಂತೆ
ಬಂದಿತೀ ಯುಗಾದಿ ಚೆಲುವ
ತಂದಿತೀ ಯುಗಾದಿ
ನಿನ್ನೆಗಳನು ಹಿಂದೆ ಸರಿಸಿ
ನಾಳೆಗಳಲಿ ಕನಸ ಇರಿಸಿ
ಇಂದು ಎಲ್ಲರೊಂದೆ ಎನಲು
ಬಂದಿತೀಯುಗಾದಿ ಚೆಲುವ
ತಂದಿತೀ ಯುಗಾದಿ
ಬಾಗಿಲಿಗೆ ತೋರಣವ ಕಟ್ಟು
ಮುಂದೆ ರಂಗವಲ್ಲಿ ಇಟ್ಟು
ಹಣ್ಣು ಹೂವು ದೀಪವಿಟ್ಟು
ಬಂದಿತೀ ಯುಗಾದಿ ಚೆಲುವ
ತಂದಿತೀ ಯುಗಾದಿ
ಹೊಸ ವರುಷದಿ ಜೇನಹರಿಸಿ
ನವಬಾಳಿಗೆ ಹೊನಲಾಗಿಸಿ
ನವನವೋಲ್ಲಾಸ ತುಂಬಿ
ಬಂದಿತೀಯುಗಾದಿ ಚೆಲುವ
ತಂದಿತೀ ಯುಗಾದಿ
✍ಸಂಧ್ಯಾಗೀತಾ ಬಾಯಾರು
Comments
Post a Comment